ಬೇಕನ್, ರೋಜರ್
1214 ? _94. ಇಂಗ್ಲಿಷ್ ತತ್ತ್ವಶಾಸ್ತ್ರಜ್ಞ ಮತ್ತು ವಿಜ್ಞಾನಿ. ಹುಟ್ಟಿದ್ದು ಸಾಮರ್ ಸೆಟ್‍ನ ಇಲ್‍ಚೆಸ್ಟರ್‍ನಲ್ಲಿ. ವಿದ್ಯಾಭ್ಯಾಸ ಆಕ್ರ್ಸ್‍ಫರ್ಡ್ ಮತ್ತು ಪ್ಯಾರಿಸಿನಲ್ಲಿ. ಗಣಿತ, ಸಂಗೀತ, ಖಗೋಳಶಾಸ್ತ್ರಗಳ ಬಗ್ಗೆ ಜ್ಞಾನ ಸಂಪಾದಿಸಿದ. 1240ರಲ್ಲಿ ಪ್ಯಾರಿಸಿಗೆ ತೆರಳಿ ಉಪನ್ಯಾಸಕನಾಗಿದ್ದು ಕೊಂಡು, ಅರಿಸ್ಟಾಟಲನ ಕೃತಿಗಳನ್ನು ಮನನಮಾಡಿದ. ಮತಧರ್ಮ ಮತ್ತು ವಿಜ್ಞಾನಗಳ ಸಮನ್ವಯ ಮಾಡಬೇಕೆಂಬ ಇಚ್ಛೆಯಿಂದ ತನ್ನ ಮನಸ್ಸಿನಲ್ಲಿಯೇ ಮಂಡಿಗೆ ತಿಂದ. ಆ ಕಾಲದ ಮತಪ್ರಚಾರಕರ ಬೋಧನಾಕ್ರಮದ ಬಗ್ಗೆ ಅಸಂತುಷ್ಟಿಗೊಂಡ ಈತ ಮತಧರ್ಮವನ್ನು ವೈಜ್ಞಾನಿಕ ದೃಷ್ಟಿಯಲ್ಲಿ ನೋಡಿ ಅದನ್ನು ಉತ್ತಮರೀತಿಯಲ್ಲಿ ಪ್ರತಿಪಾದಿಸಬೇಕೆಂದು ಚರ್ಚಿನ ಅಧಿಕಾರಿಗಳನ್ನು ಪ್ರಾರ್ಥಿಸಿದ. 

	1247ರಲ್ಲಿ ಬೇಕನ್ನನಲ್ಲಿ ಒಂದು ಬೌದ್ಧಕ ಪರಿವರ್ತನೆಯುಂಟಾಯಿತು. ಭಾಷೆಯಲ್ಲಿ ಅಡಗಿರುವ ಮಾಂತ್ರಿಕ ಶಕ್ತಿಯ ಬಗ್ಗೆ ಕುತೂಹಲಿಯಾದ ರಸ ವಿಜ್ಞಾನ ಮತ್ತು ಸಾಮುದ್ರಿಕ ಶಾಸ್ತ್ರದಲ್ಲಿ ವಿಶೇಷವಾಗಿ ಆಸ್ಥೆ ತಳೆದ. ಗಣಿತ ಶಾಸ್ತ,್ರ ಭಾಷೆಯ ಬಳಕೆ, ರಸವಿಜ್ಞಾನ, ದೃಷ್ಟಿಶಾಸ್ತ್ರಗಳನ್ನು ಅಧ್ಯಯನ ಮಾಡತೊಡಗಿದ. ಪ್ರಕೃತಿಯ ರಹಸ್ಯಗಳನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದ. ಅರಿಸ್ಟಾಟಲ್ ತಾನು ತಿಳಿದ ವಿಜ್ಞಾನವನ್ನು ಅತ್ಯಂತ ಗೂಢ ರೀತಿಯಲ್ಲಿ ಅಲಂಕೃತ ಭಾಷೆಯಲ್ಲಿ ನಿರೂಪಿಸಿದ್ದಾನೆಂದು ಬೇಕನ್ ಭಾವಿಸಿದ. ಆ ರಹಸ್ಯ ಎಲ್ಲರಿಗೂ ಅರ್ಥವಾಗದೆ ನೀತಿನಿಷ್ಠ, ದೃಢಚಿತ್ತ ಮತ್ತು ದೃಢಕಾಯನಾದ ಪ್ರಜ್ಞಾವಂತನಿಗೆ ಮಾತ್ರ ವೇದ್ಯವಾಗುತ್ತದೆಂದು ನಂಬಿದ. ಸಂಖ್ಯೆಗಳ ಐಂದ್ರಜಾಲಿಕ ಶಕ್ತಿಯಲ್ಲಿ ವಿಚಿತ್ರ ನಂಬಿಕೆ ಹೊಂದಿದ. 

	1257ರಲ್ಲಿ ಈತ ಕ್ರೈಸ್ತಸಂನ್ಯಾಸಿ ಮಂಡಳಿಯ ಸದಸ್ಯನಾದ. ಇದರಿಂದ ಈತನಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಯಿತು. ವಿಜ್ಞಾನದಲ್ಲಿ ಈತನಿಗೆ ಇದ್ದ ಆಸಕ್ತಿ, ಮತಧರ್ಮ ಸುಧಾರಣೆಯ ಬಗ್ಗೆ ಇದ್ದ ಧೋರಣೆಗಳು ಸಹೋದ್ಯೋಗಿಗಳಲ್ಲಿಯೂ ವಿದ್ವಾಂಸರಲ್ಲಿಯೂ ಇವನ ಬಗ್ಗೆ ಅಪನಂಬಿಕೆ ಮೂಡಿಸಿತು. ಕ್ರೈಸ್ತ ಧರ್ಮದ ಒಳ ಸಂಪ್ರದಾಯಗಳು, ನೀರಸವಾದ ಆಚರಣೆಗಳು, ವ್ಯರ್ಥ-ಪ್ರಾರ್ಥನೆಗಳ ಈತನಿಗೆ ಬೇಸರ ಹುಟ್ಟಿಸಿದುವು. ಕ್ರೈಸ್ತಪಾದ್ರಿಗಳಲ್ಲಿ ಕೆಲವರು ಬೂಟಾಟಿಕೆಯ ಜೀವನವನ್ನು ನಡೆಸುತ್ತಿದ್ದುದು ಈತನಿಗೆ ಅಸಹ್ಯ ತಂದಿತು. ಸಂನ್ಯಾಸಿಗಳ ಜೀವನಸೌಧ ನೈತಿಕ ತಳಹದಿಯ ಮೇಲೆ ನಿಂತಿರಬೇಕೆಂದು ವಾದಿಸತೊಡಗಿದ. ಇವೆಲ್ಲದರ ಜೊತೆಗೆ ಸಿಡಿಮದ್ದಿನಂಥ ಪುಡಿಯನ್ನು ಕಂಡುಹಿಡಿದುದು ಮಸೂರಗಳನ್ನು ತಯಾರಿಸಿದುದು, ಬೆಳಕಿನ ಸ್ವರೂಪ ಹಾಗೂ ಕಾಮನಬಿಲ್ಲಿನ ಲಕ್ಷಣ ತಿಳಿದುದು-ಈ ಮುಂತಾದ ಕಾರ್ಯಗಳಿಂದಾಗಿ ಈತನನ್ನು ಮಾಟಗಾರನೆಂದು ಕರೆಯಲಾರಂಭಿಸಿದರು. ಇವನ್ನೆಲ್ಲ ಲೆಕ್ಕಿಸದೆ ಬೇಕನ್ ಪ್ರಯೋಗಗಳನ್ನು ನಡೆಸುತ್ತಿದ್ದುದರಿಂದ ಕೆಲವರು ಈತನನ್ನು ಪಂಡಿತನೆಂದೂ ಪ್ರೇತಮಿತ್ರನೆಂದೂ ಹಾಸ್ಯಮಾಡಲಾರಂಭಿಸಿದರು. 1266ರಲ್ಲಿ ಈತ ನಾಲ್ಕನೆಯ ಪೋಪ್ ಕ್ಲೆಮೆಂಟ್‍ನಿಗೆ ಬರೆದಿದ್ದ ಪತ್ರದಲ್ಲಿ ಚರ್ಚು ಮತ್ತು ವಿದ್ಯಾಲಯಗಳ ಸುಧಾರಣೆಯ ಬಗ್ಗೆ ಕೆಲವು ಅಂಶಗಳನ್ನು ಸೂಚಿಸಿದ್ದ. ಪೋಪನು ಈ ಅಂಶಗಳಿಗೆ ಸ್ಪಷ್ಟೀಕರಣ ಕೇಳಿ ಇವನ್ನು ಕಾರ್ಯರೂಪಕ್ಕೆ ತರುವ ವಿಧಾನ ತಿಳಿಸುವಂತೆ ಕೇಳಿದ. ಈತ ಬರೆದ ಕಮ್ಯೂನಿಯ ನ್ಯಾಚುರ್ಯಾಲಿಸಮ್ (1268); ಕಮ್ಯೂನಿಯ ಮ್ಯಾಥಮ್ಯಾಟಿಕಾ (1268); ಮತ್ತು ಕಾಂಪೆಂಡಿಯಮ್ ಫಿಲಾಸಫಿಯೇ (1272) ಕೃತಿಗಳು ಬಹುಜನರ ಗಮನ ಸೆಳೆಯಲೇ ಇಲ್ಲ. ವಿದ್ವಾಂಸರು ಕೂಡ ಈತನ ಬಗ್ಗೆ ತಿರಸ್ಕಾರ ಭಾವವನ್ನೇ ತಳೆದರು. ಪೋಪ್ ಮತ್ತು ಇತರರ ಅವಕೃಪೆಗೆ ಪಾತ್ರನಾದ ಈತ ಹತ್ತುವರ್ಷಗಳ ಕಾಲ ಸೆರೆಮನೆಯಲ್ಲಿರಬೇಕಾಯಿತು. 

	ಬೇಕನ್ ವಿಜ್ಞಾನ ಪ್ರಪಂಚದಲ್ಲಿ ತನ್ನ ಕಾಲಕ್ಕಿಂತ ಮುನ್ನೂರು ವರ್ಷಗಳಷ್ಟು ಮುಂದಿದ್ದ. ಈತನ ಮುಖ್ಯ ಕೃತಿಗಳಾದ ಓಪಸ್ ಮೇಜಸ್ (ವ್ಯಾಕರಣ, ತರ್ಕ, ಗಣಿತ, ಭೌತಶಾಸ್ತ್ರ ಹಾಗೂ ತತ್ತ್ವಶಾಸ್ತ್ರವನ್ನು ಒಳಗೊಂಡ ಪುಸ್ತಕ) ಮತ್ತು ಅದರ ಸಂಗ್ರಹವಾದ ಓಪಸ್ ಮೈನರ್ ಇವೆರಡೂ ಯಾರ ಆಸಕ್ತಿಯನ್ನೂ ಕೆರಳಿಸಲಿಲ್ಲ. ಎಷ್ಟೇ ಬುದ್ಧಿವಂತನಾದರೂ ವಿದ್ಯಾವಂತ ಸಹಚರರು ಈತನ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಲೇ ಬಂದರು. ಒಬ್ಬ ನೈಜ ಸಂಶೋಧಕನಿಗೆ ಎಂಥ ತೊಂದರೆಗಳು ಎದುರಾಗುತ್ತವೆ ಎಂಬುದಕ್ಕೆ ರೋಜರ್ ಬೇಕನ್‍ನ ಜೀವನವೇ ನಿದರ್ಶನ. 13ನೆಯ ಶತಮಾನದಲ್ಲಿಯೇ ಯಾಂತ್ರಿಕ ದೋಣಿಗಳ, ವಿಮಾನಗಳ, ಎಂಜಿನ್ನುಗಳ ಬಗ್ಗೆ ಭವಿಷ್ಯವನ್ನು ನುಡಿದಿದ್ದ ಬೇಕನ್ ಅಸಾಧಾರಣ ಪ್ರತಿಭಾಶಾಲಿ ಎನ್ನಲು ಅನುಮಾನವಿಲ್ಲ. 
(ಎಂ.ಆರ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ